ವಾರ್ತೆ
ವಾರ್ತೆಯ ಮುಖಪುಟ
07 ಸೆಪ್ಟೆಂಬರ್ , 2009

ಅವಲಂಬನಕ್ಕೆ ಇಂದು ಮೊದಲ ಹುಟ್ಟು ಹಬ್ಬ.

ಕಳೆದ ವರ್ಷ ಸೆಪ್ಟೆಂಬರ್ 7 ರಂದು ಶ್ರೀಗಳವರ ಆಶಯ, ಆಶೀರ್ವಾದ ಮತ್ತು ಸ್ಪೂರ್ತಿಯಿಂದ ಹುಟ್ಟಿದ್ದು ಹವ್ಯಕ ಸಹಾಯವಾಣಿ “ಅವಲಂಬನ”. ಶ್ರೀಗಳ ಕಲ್ಪನೆಯ ಕೂಸು ಅವಲಂಬನ. ಹೆಸರಲ್ಲೇ ವಿಶೇಷತೆಯನ್ನು ಅವಲಂಬನ ಹೊಂದಿದೆ. ಅವಲಂಬನದಲ್ಲಿ ಐದು ಪ್ರಮುಖ ವಿಭಾಗಗಳಿವೆ. ಕೆವವು ದಿನಗಳ ಹಿಂದೆ ಅವಲಂಬನದ ಶಾಖಾ ಘಟಕ ಸಾಗರದಲ್ಲಿ ಪ್ರಾರಂಭವಾಗಿದೆ.

ಇಂದು ಅವಲಂಬನದ ಎಲ್ಲ ಕಾರ್ಯಕರ್ತರುಗಳಿಗೆ ಹೆಮ್ಮೆಯ ದಿನ. ದಿನದಿಂದ ದಿನಕ್ಕೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವಲಂಬನ ತೊಡಗಿಸಿಕೊಂಡು ಒಂದು ಉತ್ತಮ ಸಂಘಟನೆಯಾಗಿ ರೂಪುಗೊಳ್ಳುತ್ತಿದೆ. ವಿಶೇಷವೆಂದರೆ ಅವಲಂಬನದಲ್ಲಿ ಎಲ್ಲರೂ ನಾಯಕರೆ. ಎಲ್ಲರಿಗೂ ಸಮಾಜಮುಖಿ ಕೆಲಸಗಳಲ್ಲಿ ಜವಾಬ್ದಾರಿಯಿದೆ. 


ಆತ್ಮೀಯರೇ, ಇಂದಿನ ಸ್ಪರ್ದಾತ್ಮಕ ಯುಗದಲ್ಲಿಸಹಾಯ ಎನ್ನುವುದು ಮರೀಚಿಕೆಯಾಗಿದೆ. ಎಲ್ಲೆಲ್ಲಿಯೂ ಸ್ವಾರ್ಥ ತಾಂಡವವಾಡುತ್ತಿದ್ದೆ. ಇದರ ಮದ್ಯ ಅದೆಷ್ಟೋ ಹವ್ಯಕರು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಭವಿಷ್ಯದತ್ತ ಸರಿಯಾದ ಮಾಹಿತಿಯಿಲ್ಲದೇ ಸಮಾಜ ಘಾತುಕ ಶಕ್ತಿಗಳ ಜೊತೆ ಸೇರಿ ತಮ್ಮ ಜೊತೆ ತಮ್ಮವರೆಲ್ಲರನ್ನೂ ನಾಶ ಮಾಡುವ ಸಾದ್ಯತೆಗಳು ಬಹಳ ಹೆಚ್ಚಾಗುತಿದೆ. ಅವರೆಲ್ಲರ ನೋವನ್ನು ನಿಗಿಸಿ ಬದುಕಿನತ್ತ ಆಶಾಕಿರಣ ಕೆಲಸ ನಮ್ಮಿಂದಾಗಬೇಕಾಗಿದೆ. ಅವಲಂಬನ ಈಗಾಗಲೇ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಬಹಳ ರೀತಿಯಲ್ಲಿ ಸಹಾಯ ಮಾಡುತ್ತಿದೆ.


ಅವಲಂಬನದ ಸಿಂಹಾವಲೋಕನ


ಅವಲಂಬನದ ಪ್ರಪ್ರಥಮ ಕಾರ್ಯಕ್ರಮ “HR Training”. ಬೆಂಗಳೂರಿನಲ್ಲಿ ಇರುವ ಹವ್ಯಕ HRಗಳ ತಂಡ ಅವಲಂಬನದ “ಬದುಕು” ವಿಭಾಗದ ಅಡಿಯಲ್ಲಿ ರೂಪುಗೊಂಡಿದ್ದು 50ಕ್ಕೂ ಹೆಚ್ಚು HRಗಳು ನಮ್ಮ ಹವ್ಯಕರಿಗೆ ಬದುಕಿನಲ್ಲಿ ನೆಲೆಯೂರಲು ಸಹಾಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು.


ನಂತರ ಆದ ಕಾರ್ಯಕ್ರಮ ಅಕ್ಷರ ವಿಭಾಗದ ಅಡಿಯಲ್ಲಿ ಆದ “ಭವಿಷ್ಯ” ಕಾರ್ಯಾಗಾರ. ಇದು ಭವ್ಯ ಭಾರತದ ಭಾವಿ ಪ್ರಜೆಗಳ ಭದ್ರ ಭವಿಷ್ಯಕ್ಕೊಂದು ಮಾರ್ಗದರ್ಶನ.  “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು”. ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಬಾಗಿದ್ದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ಅವಲಂಬನ ೧೦ನೇ ತರಗತಿಯ ಮಕ್ಕಳು ಹಾಗು ಅವರ ತಾಯ್ತಂದೆಯರಿಗೆ ಬದಲಾಗುತ್ತಿರುವ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತೊರುವ ಹೊಸ ಉದ್ಯೋಗ ಅವಕಾಶಗಳನ್ನು ಪರಿಚಯಿಸುವ ಕಾರ್ಯಕ್ರಮ “ಭವಿಷ್ಯ” ವನ್ನು ಮಂಗಳೂರಿನಲ್ಲಿ ಮತ್ತು ಸಾಗರದಲ್ಲಿ ಬಹಳ ಯಶಸ್ವೀಯಾಗಿ ನಡೆಸಿತು. ನೂರಾರು ವಿಧ್ಯಾರ್ಥಿಗಳು ಮತ್ತು ಪೋಷಕರು ಇದರ ಪ್ರಯೋಜನವನ್ನು ಪಡೆದು ಮತ್ತೆ ಮತ್ತೆ ನಡೆಸಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆಂದರೆ ನಮ್ಮ ಶ್ರಮ ಸಾರ್ಥಕ ಅಲ್ಲವೇ?


ಅವಲಂಬನ ಆಗಾಗ್ಗೆ ಸಮಾಜ ಭಾಂದವರಿಂದ ರಕ್ತದ ಅವಶ್ಯಕತೆ ಕುರಿತಾದ ಬೇಡಿಕೆಗಳನ್ನು ಎದುರಿಸುತ್ತಿದ್ದು ಅವಲಂಬನದ ಹೆಚ್ಚಿನ ಕಾರ್ಯಕರ್ತರುಗಳು ಉದ್ಯೋಗದ ಹಿನ್ನಲೆಯಲ್ಲಿ ಇರುವುದರಿಂದ ಸೂಕ್ತ ಸಮಯಕ್ಕೆ ಬೇಡಿಕೆ ಪೂರೈಸುವುದು ಒಂದು ಸವಾಲಾಗಿತ್ತು. ಈ ಹಿನ್ನಲೆಯಲ್ಲಿ”ನಲಿವು” ವಿಭಾಗವು ರಾಷ್ಟ್ರೋತ್ಥಾನ ಪರಿಷತ್ ಸಂಪರ್ಕಿಸಿ ರಕ್ತದ ಅವಶ್ಯಕತೆಗಳಿಗೆ ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿದೆ. ಅದರ ಮೊದಲ ಹೆಜ್ಜೆಯೇ ಉಚಿತ ರಕ್ತದಾನ ಶಿಬಿರ. ಶಿಬಿರದಲ್ಲಿ ಬಹಳಷ್ಟು ರಕ್ತದಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕಾರಿಯಾದರು.


“ವೈಧ್ಯೋ ನಾರಾಯಣೋ ಹರಿ” ಪುರಾಣ ಕಾಲದಿಂದ ಪ್ರಚಲಿತವಾಗಿರುವ ನಾಣ್ಣುಡಿ. ಆದರೆ ಈಗ ವೈಧ್ಯಕೀಯ ಸೌಲಭ್ಯ ಎನ್ನುವುದು ಬಡವರಿಗೆ ಮರೀಚಿಕೆಯಾಗಿದೆ. ಅದೆಷ್ಟೋ ಹವ್ಯಕ ಬಡ ಕುಟುಂಬಗಳು ಸರಿಯಾದ ಚಿಕಿತ್ಸೆಯಿಲ್ಲದೇ ಹತಾಶರಾಗಿ ನೋವನ್ನು ಅನುಭವಿಸುತ್ತಿದ್ದಾರೆ. ನೊಂದ ಜೀವಗಳಿಗೆ ತಂಪೆರೆಯುವ ಕೆಲಸ ಅವಲಂಬನ ಸಾದ್ಯವಾದಷ್ಟು ಮಾಡುತ್ತಿದೆ. ಬೆಂಗಳೂರಿನಲ್ಲಿ ಇರುವ ವೈದ್ಯರುಗಳನ್ನು ಸಂಪರ್ಕಿಸಿ ಉತ್ತಮ ಚಿಕಿತ್ಸೆಯನ್ನು ನೀಡಲು ಅವಲಂಬನ ಸಹಾಯ ಮಾಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಇರುವ ಸುಮರು ೫೦ ಕ್ಕೂ ಹೆಚ್ಚು ವೈದ್ಯರುಗಳು ಅವಲಂಬನದ ಸಂಪರ್ಕದೊಂದಿದ್ದಾರೆ.


ಹವ್ಯಕರಲ್ಲಿ ಕಾಡುವ ದೊಡ್ಡ ಸಮಸ್ಯೆ “ಲಗ್ನ”. ಇದರತ್ತ ಕಾರ್ಯೋನ್ಮುಖವಾಗಿದ್ದು ಅವಲಂಬನದ ‘ಲಗ್ನ ವಿಭಾಗ. ಇದರ ಅಡಿಯಲ್ಲಿ ಒಂದು ತಂಡ ಉತ್ತರ ಭಾರತದಲ್ಲಿ ಪ್ರವಾಸ ಮಾಡಿ ಅಲ್ಲಿನ ಬ್ರಾಹ್ಮಣ ಸಮುದಾಯದ ಮುಖಂಡರನ್ನು ಬೇಟಿ ಮಾಡಿ ಅಲ್ಲಿಯ ವಿವರಗಳನ್ನು ಅಧ್ಯಯನ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಅಲ್ಲಿನ ಬ್ರಾಹ್ಮಣ ಸಮಾಜದ ಮುಖಂಡರುಗಳು ನಮ್ಮಲಿಗೆ ಆಗಮಿಸಿ ಇಲ್ಲಿಯ ವಿವರಗಳನ್ನು ತಿಳಿದುಕೊಳ್ಳುವವರಿದ್ದಾರೆ. ಇದು ಉತ್ತರ ಮತ್ತು ದಕ್ಷಿಣದ ಕೊಂಡಿಯಾಗಲಿದೆ.


ಹವ್ಯಕರಲ್ಲಿ ಕಾಡುವ ಇನ್ನೊಂದು ಸಮಸ್ಯೆ “ವಸತಿ”. ಪಟ್ಟಣಗಳಿಗೆ ಬರುವ ಹವ್ಯಕರಿಗೆ ಇಲ್ಲಿಯ ಮಾಹಿತಿ ಸರಿಯಾಗಿ ಇರುವುದಿಲ್ಲ. ಪೋಷಕರಿಗೂ ಒಂದು ರೀತಿಯ ಆತಂಕವಿರುತ್ತದೆ. ಇದಕ್ಕೆಲ್ಲಾ ಪರಿಹಾರವಾಗಿ ಕಾರ‍್ಯ ನಿರ್ವಹಿಸುತ್ತಿದೆ “ವಸತಿ” ವಿಭಾಗ. ಬೆಂಗಳೂರಿನಲ್ಲಿ ಇರುವ ಎಲ್ಲ ವಸತಿಗೆ ಸಂಬಂದಪಟ್ಟ ಮಾಹಿತಿ ಸಂಗ್ರಹಿಸಿ ಅವಶ್ಯಕತೆಯಿರುವವರಿಗೆ ಸಹಾಯ ಮಾಡಿತ್ತಿದೆ. ಹಳ್ಳಿಹಳ್ಳಿಗಳಿಂದ ವಸತಿಯ ಬಗ್ಗೆ ನಮಗೆ ಕರೆಗಳು ಬರುತ್ತಾಯಿವೆ.


ಅವಲಂಬನದ ಇನ್ನೊಂದು ಹೆಮ್ಮೆಯ ಕಾರ್ಯಕ್ರಮ ಸರಣಿ “ತಿಂಗಳ ಬೆಳಕು”. “ಅಕ್ಷರ”ದ ಅಡಿಯಲ್ಲಿ ನಡೆಯುತ್ತಿರುವ ಇದು ಪ್ರತೀ ತಿಂಗಳು ಪ್ರೌಡಶಾಲ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸುವುದು. ಆಯ್ದ ಬಡ ಹವ್ಯಕ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಉಚಿತವಾಗಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ತಿಂಗಳ ಬೆಳಕಿನಲ್ಲಿ ಎರಡು ವಿಭಾಗಗಳಿವೆ. “ಬಾಲಾ ಚಂದಿರ” ಕೇವಲ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವಂತದ್ದು ಮತ್ತು “ಪೂರ್ಣ ಚಂದಿರ” ವಿದ್ಯಾರ್ಥಿಗಳೊಂದಿಗೆ ಪೋಷಕರು ಭಾಗವಹಿಸುವಂತದ್ದು. ತಿಂಗಳಬೆಳಕು ಕಾರ್ಯಕ್ರಮ ಸದ್ಯ ಸಾಗರ ಪ್ರಾಮ್ತ್ಯದಲ್ಲಿ ನಡೆಯುತ್ತಿದ್ದು ಮುಂದೆ ಎಲ್ಲಾ ಪ್ರಾಂತ್ಯಗಳಿಗೆ ವಿಸ್ತರಿಸುತ್ತೇವೆ.
ನಮ್ಮ ಎಲ್ಲಾ ಕೆಲಸಗಳಿಗೆ ಮಾರ್ಗದರ್ಶಕರು ನಮ್ಮ ಶ್ರೀಗಳು. ಅವಲಂಬನದ ಮುಂದೆ ಬೆಟ್ಟದಷ್ಟು ಕೆಲಸಗಳಿವೆ. ಇಂತಹ ಉತ್ತಮ ಕಾರ‍್ಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ನಾವೆಲ್ಲರೂ ಒಟ್ಟಾಗಿ ಸಹಾಯ ಮಾಡೋಣ.


ನೀವು ಅವಲಂಬನದಲ್ಲಿ ಕೆಳಕಂಡ ರೀತಿಯಲ್ಲಿ ಭಾಗಿಯಾಗಬಹುದು

1. ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರತಿಭಾವಂತ ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ನೀಡಬಹುದು

2. ವಿದ್ಯಾರ್ಜನೆ ಮತ್ತು ಉದ್ಯೋಗವನ್ನರಸಿ ಪಟ್ಟಣಗಳಿಗೆ ಬರುವ ಸಮಾಜದ ಬಂಧುಗಳಿಗೆ ವಾಸ್ತವ್ಯ ವ್ಯವಸ್ಥೆಯ ಮಾಹಿತಿ ನೀಡಬಹುದು ಮತ್ತು ಸಹಾಯ ಮಾಡಬಹುದು

3. ವಿವಾಹಾಪೇಕ್ಷಿತ ಹವ್ಯಕ ಬಂಧುಗಳ ಮಾಹಿತಿ ಸಂಗ್ರಹ ಮತ್ತು ನೆರವು ನೀಡಬಹುದು

4. ಉದ್ಯೋಗಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ಸಹಾಯ ಮಾಡಬಹುದು

5. ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ನೆರವು ನೀಡಬಹುದು

6. ಅವಲಂಬನ ರಕ್ತದಾನಿಗಳ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಬಹುದು ಮತ್ತು ರಕ್ತದಾನಿಗಳ ಮಾಹಿತಿ ನೀಡಬಹುದು

7. ಹವ್ಯಕ ಸಮಾಜದ ಬಗ್ಗೆ ಉಪಯುಕ್ತ ಮಾಹಿತಿಯಿದ್ದರೆ ನಮಗೆ ತಿಳಿಸಬಹುದು

8. ಅವಲಂಬನದ ಜೊತೆ ಕಾರ್ಯಕರ್ತರಾಗಿ ಕೆಲಸ ಮಾಡಬಹುದು

ನಮ್ಮ ವಾರ್ಷಿಕೋತ್ಸವವನ್ನು ನಮ್ಮ ಶ್ರೀಗಳವರೊಂದಿಗೆ ನಾಡಿದ್ದು ಸೆಪ್ಟೆಂಬರ್ ೧೩ ಭಾನುವಾರ ಮಧ್ಯಾನ್ನ ೨ ಘಂಟೆಗೆ ಗಿರಿನಗರದಲ್ಲಿ ಆಚರಿಸೋಣ. ಎಲ್ಲರೂ ಬರ್ತೀರಾ ತಾನೆ?


ಇಂತಿ ಪ್ರೀತಿಯೊಂದಿಗೆ
ಅವಲಂಬನ ತಂಡ