ಕಾರ್ಯಯೋಜನೆಗಳು
ತಿಂಗಳ ಬೆಳಕು
 
"ಬದುಕ ಕತ್ತಲೆ ಕಳೆವ ಸಂಸ್ಕೃತಿಯ ಸಿಂಚನ... ಅಜ್ಞಾನ ತೆರೆ ಸರಿಸಿ ಸುಜ್ಞಾನ ಚಿಂತನ.."
 

ಪ್ರೀಯರೆ,
 
ಅವಲಂಬನದ ’ಅಕ್ಷರ’ ವಿಭಾಗ ತನ್ನ  ಹಿಂದಿನೆರಡು ಕಾರ್ಯಕ್ರಮಗಳಲ್ಲಿ ಪಡೆದ ಅನುಭವ ಹಾಗೂ ಸಮಾಜದ ಚಿಂತಕರ ಸಲಹೆಗಳ ಹಿನ್ನೆಲೆಯಲ್ಲಿ ಧೀರ್ಘಕಾಲೀನ ಯೋಜನೆಯೊಂದಾರ ಕುರಿತಾಗಿ ಯೋಜಿಸುತ್ತಿದೆ.
 
ನಮ್ಮ ಸಮಾಜವು ಜನಸಂಖ್ಯೆಯ ಆಧಾರದ ಮೇಲೂ, ತನ್ನ ಭೌಗೊಳಿಕ ಹರಹಿನಿಂದಲೂ ಬಲು ವಿಶಾಲವಾದ್ದರಿಂದ ನಮ್ಮ ’ವರ್ಕ್‌ಶಾಪ್’ ಮಾದರಿಯ ಕಾರ್ಯಕ್ರಮಗಳಿಂದ ಶಿಬಿರಾರ್ಥಿಗಳ ಮೇಲೆ ಅಪೇಕ್ಷಿತ ಪರಿಣಾಮವನ್ನು ಬೀರುವಂತೆ ಮಾಡುವುದು, ಆ ಪರಿಣಾಮಗಳನ್ನು ಧೀರ್ಘಕಾಲೀನ ಪರಿವರ್ತನೆಗಳನ್ನಾಗಿಸುವುದು ಕಷ್ಟಸಾಧ್ಯವೆಂಬುದು ನಮ್ಮರಿವಿಗೆ ಬಂದಿದೆ.ಒಂದು ಎರೆಡು ದಿನಗಳ ಶಿಬಿರಗಳು ಶಿಬಿರಾರ್ಥಿಗಳಿಗೆ ಒಂದಿಷ್ಟು ಹೊಸ ಹೊಳಹುಗಳನ್ನು ಕೊಡಬಹುದಾದರೂ ಧೀರ್ಘಕಾಲೀನ ಪರಿಣಾಮಗಳನ್ನು ಬೀರಲಾರವು ಎನ್ನುವುದು ಇಂತಹ ಕಾರ್ಯಗಾರಗಳನ್ನು ಆಯೋಜಿಸಿದ, ಭಾಗವಹಿಸಿದ ಎಲ್ಲರಿಗೂ ವಿದಿತವೆ. ಕೊಟ್ಟ ಹೊಸ ವಿಷಯಗಳೆಂಬ ಬೀಜಗಳಿಗೆ ಕಾಲಕಾಲಕ್ಕೆ, ಸಕಾಲಕ್ಕೆ ಪೂರಕ ಮಾಹಿತಿ ಎಂಬ ನೀರು ಗೊಬ್ಬರಗಳನ್ನೆರೆದು ಪೋಷಿಸುವುದು,ಅಂತೆಯೆ ಮುಂದೆ ಸಮಾಜದ ದಿಕ್ಕನ್ನು ನಿರ್ದೇಶಿಸಬಹುದಾದ ಸಂಸ್ಕೃತಿಯ ಮಹಾವೃಕ್ಷಗಳಾಗಲಿರುವ ಈ ಸಸಿಗಳನ್ನು ದುರ್ವಿಚಾರಗಳಿಂದ ರಕ್ಷಿಸಿವುದು, ಈ ಹಸಿಗೋಡೆಯಂತಹ ಮನಸುಗಳು ಸರ್ವೊತೋಮುಖ ವಿಕಾಸವಾಗುವುದಕ್ಕೆ ಬೇಕಾದ ವಾತಾವರಣವನ್ನು ನಿರ್ಮಿಸುವುದು ಸಮಾಜದೆಡೆಗೆ ಕಳಕಳಿಯಿರುವ ಯಾವುದೇ ಸಂಸ್ಥೆಗೂ ಒಂದು ಬೃಹತ್ ಸವಾಲು.ಅಸಾಧ್ಯವೆಂದೆ ಹಲವರ ಅಭಿಮತ.ಆದರೆ ಸಮಾಜದಲ್ಲಿ ಇಂತಹ ಹಲವು ಕ್ರಾಂತಿಕಾರಿ ಬದಲಾವಣೆಯನ್ನೆಸಗುತ್ತಿರುವ ಒಂದು ’ಮಹತ್’ಶಕ್ತಿಯೊಂದು ವ್ಯಕ್ತಿರೂಪವಾಗಿ ನಮ್ಮೊಡನಿರುವುದು ಇಂತಹ ಸಾಹಸಗಳೆನ್ನೆಸಗಲು ಅವಲಂಬನದ ಯುವಮನಸುಗಳಿಗೆ ಮೂಲಸ್ಪೂರ್ತಿಯಾಗಿದೆ.
 
ಹೀಗೆ ಆ ಶಕ್ತಿಯು ಕೈಗೊಂಡಿರುವ ಅಭೂತಪೂರ್ವ ಪರಿವರ್ತನಾಪರ್ವದಲ್ಲಿ ಉಪಕರಣಗಳಾಗ ಬಯಸುವ ಅವಲಂಬನದ ಯುವಮನಸ್ಸುಗಳಲ್ಲಿ ಧೀರ್ಘಕಾಲೀನ ಯೋಜನೆಯೊಂದು ಈಗ ತಾನೆ ಮಿಸುಗಲಾರಂಭಿಸಿದೆ.
ಕೆಲತಿಂಗಳ ಹಿಂದೆ ಶ್ರೀಗಳಿಂದ ಉಧ್ಘಾಟಿತವಾದ ಸಾಗರ ಅವಲಂಬನ ಘಟಕ ಹಾಗು ನಮ್ಮ ಜಂಟಿ ಪ್ರಯತ್ನವೇ ಈ ಹೊಸ ಯೋಜನೆ. ಸದ್ಯ ಸಾಗರ ಪ್ರಾಂತ್ಯದಲ್ಲಷ್ಟೆ ಅನುಷ್ಠಾನಗೊಳ್ಳಲಿರುವ ಈ ಯೋಜನೆಯನ್ನು ಬರುವ ದಿನಗಳಲ್ಲಿ ಉಳಿದ ಪ್ರಾಂತ್ಯಗಳಿಗೆ ವಿಸ್ತರಿಸಬೇಕಾಗಿದೆ.
 
ಪಾಶ್ಚಿಮಾತ್ಯ ಪ್ರಭಾವಿತ ’ಬಿರುಬಿಸಿಲಿನಂತಹ’ ವೇಗದ ಜೀವನಶೈಲಿಯಿಂದ ’ತಂಬೆಲರಿನಂತಹ’ ಶಾಂತಿಯುತ ಭಾರತೀಯ ಜೀವನಶೈಲಿಯತ್ತ ಯುವ ಜನಾಂಗ ಮರಳಲು, ಆ ಕುರಿತಾದ ಜಾಗೃತಿಯೊಂದನ್ನು ನಮ್ಮಲ್ಲಿ ಮೂಡಿಸಿಕೊಳ್ಳಲು ಅವಲಂಬನದ ಕಿರು ಪ್ರಯತ್ನವಾದ ಈ ಯೋಜನೆಯ ಹೆಸರು ’ತಿಂಗಳ ಬೆಳಕು’ ಎಂದು.
 
ಪ್ರತಿ ತಿಂಗಳು ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸುವುದು ಯೋಜನೆಯ ಮುಖ್ಯಾಂಶ.
 
ಯೋಜನೆಯ ವಿವರಗಳು ಇಂತಿವೆ.

 • ಸಾಗರ ಪ್ರಾಂತ್ಯದಲ್ಲಿ ಒಟ್ಟು ೨೧ ಸೀಮೆಗಳಿದ್ದು ಪ್ರತೀ ಸೀಮೆಯಲ್ಲಿ ಇಬ್ಬರಂತೆ (ಒಂದು ಗಂಡು, ಒಂದು ಹೆಣ್ಣು) ಒಟ್ಟು ೪೨ ೮ನೇ ತರಗತಿಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
 • ಹೀಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ಶಿಬಿರವೊಂದನ್ನು ಅವಲಂಬನ ನಡೆಸುತ್ತದೆ. ಶಿಬಿರದ ಅವಧಿ ಬೆಳಗ್ಗೆ ೧೧ ಗಂಟೆಯಿಂದ ಅಪರಾಹ್ನ ೪ ಗಂಟೆಯವರೆಗೆ.
 • ಹೀಗೆ ನಡೆಸಲಾಗುವ ಶಿಬಿರದಲ್ಲಿ ಎರಡು ವಿಧ.
  • ಕೇವಲ ವಿದ್ಯಾರ್ಥಿಗಳಷ್ಟೇ ಭಾಗವಹಿಸುವಂತಹದ್ದು ( ’ಬಾಲ ಚಂದಿರ’).
  • ವಿದ್ಯಾರ್ಥಿಗಳೊಂದಿಗೆ ಪೋಷಕರೂ ಭಾಗವಹಿಸುವಂತಹದ್ದು (’ಪೂರ್ಣ ಚಂದಿರ’).
 • ’ಬಾಲ ಚಂದಿರ’ ಕಾರ್ಯಕ್ರಮದ ದಿನಚರಿ ಹೀಗಿರುತ್ತದೆ.    ಒಂದು ಗಂಟೆಯ ಒಟ್ಟು ನಾಲ್ಕು ಅವಧಿಗಳು. ಅವು,    
  • ಸಂಸ್ಕೃತಿ. - ವಿದ್ವಾನ್ ಜಗದೀಶ ಶರ್ಮ ಮತ್ತು ಅತಿಥಿ ಉಪನ್ಯಾಸಕರಿಂದ.
  • English Grammer and spoken english.  - ಪರಿಣತ ಪ್ರಾಧ್ಯಾಪಕರಿಂದ 
  • ವ್ಯಕ್ತಿತ್ವ ವಿಕಸನ ಹಾಗೂ ವೈಜ್ಞಾನಿಕ ಉಪನ್ಯಾಸಗಳು- ಆಹ್ವಾನಿತ ಸಂಪನ್ಮೂಲವ್ಯಕ್ತಿಗಳಿಂದ
  • ಸ್ಪರ್ಧಾ ವಿನೋದ. ( ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಇತ್ಯಾದಿ)
 • ಪೂರ್ಣ ಚಂದಿರ ಕಾರ್ಯಕ್ರಮದಲ್ಲಿ ೩ ಅವಧಿಗಳು ಸಂಸ್ಕೃತಿಯ ಕುರಿತಾಗಿದ್ದರೆ ಒಂದು ಅವಧಿ ಮಕ್ಕಳಿಗೆ  English ತರಗತಿಗಳು, ಅದೇ ಸಮಯದಲ್ಲಿ ಪೋಷಕರಿಗೆ ಪ್ರತ್ಯೇಕ ಉಪನ್ಯಾಸ ಇರುತ್ತದೆ.
 • ಉಪನ್ಯಾಸಕರ ಲಭ್ಯತೆಯನ್ನು ಆಧರಿಸಿ ಶಿಬಿರ ’ಬಾಲ ಚಂದಿರ ’ ಅಥವಾ ’ಪೂರ್ಣ ಚಂದಿರ’ ಎಂಬುದು ೨ ತಿಂಗಳ ಹಿಂದೆಯೆ ನಿಗದಿಯಾಗಿ ಈ ಕುರಿತಾಗಿ ಪೋಷಕರಿಗೆ, ಸೀಮಾ ಪ್ರಮುಖರಿಗೆ ಪತ್ರ ರವಾನೆಯಾಗುತ್ತದೆ. ಒಂದು ತಿಂಗಳು ’ಬಾಲ ಚಂದಿರ’ ನಡೆದರೆ ಮುಂದಿನ ತಿಂಗಳು ’ಪೂರ್ಣ ಚಂದಿರ’ ಕಾರ್ಯಕ್ರಮ ನಡೆಯುತ್ತದೆ.

 
 
 
ಸ್ಥಳ: ರಾಮಚಂದ್ರಪುರ ಮಠ ಅಥವಾ ಸಾಗರಕ್ಕೆ ಹತ್ತಿರವಾದ ಸೀಮಾವ್ಯಾಪ್ತಿ ದೇವಸ್ಥಾನಗಳು, ಕಲ್ಯಾಣಮಂಟಪಗಳು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಅವಲಂಬನ ಯೋಚಿಸುತ್ತಿದ್ದು ಸಹೃದಯ ದಾನಿಗಳ ಸಹಕಾರವನ್ನು ಎದುರುನೋಡುತ್ತಿದೆ.
 
ಉದ್ಘಾಟನಾ ಕಾರ್ಯಕ್ರಮ:
ಉಧ್ಘಾಟನೆ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರಮಠ.
ದೇಶ: ಶ್ರೀವರದಾಂಬ ಸಭಾಭವನ, ವರದಾಮೂಲ, ಸಾಗರ.
ಕಾಲ: ಜುಲೈ 2, 2009

ತಿಂಗಳ ಬೆಳಕು ಉದ್ಘಾಟನಾಕಾರ್ಯಕ್ರಮಕ್ಕೆ ಅವಲಂಬನ ತಮ್ಮಲ್ಲರನ್ನೂ ಈ ಮೂಲಕ ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದೆ.
 
’ತಿಂಗಳ ಬೆಳಕಿಗೆ’ ತಮ್ಮ ಪೂರ್ಣ ಸಹಕಾರವನ್ನು ನೀರೀಕ್ಷಿಸುತ್ತ,
ಅಕ್ಷರ ವಿಭಾಗ,
ಅವಲಂಬನ ತಂಡ.
 
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.
ಶ್ರೀಯುತರಾದ ಶ್ರೀನಂದನ್ ಕುಗ್ವೆ - 9886661995, ಲಕ್ಷ್ಮೀಶ್ -9480467605, ಮಧು ದೊಡ್ಡೇರಿ - 9844220393