ಕಾರ್ಯಕ್ರಮಗಳು
ಕಾರ್ಯಕ್ರಮಗಳ ಮುಖಪುಟ

'ಭವಿಷ್ಯ'
ಭವ್ಯ ಭಾರತದ ಭಾವಿಪ್ರಜೆಗಳ ಭದ್ರ ಭವಿಷ್ಯಕ್ಕೊಂದು ಮಾರ್ಗದರ್ಶನ

ಪ್ರಿಯರೇ,

'Interview ಎದುರಿಸುವುದು ಹೇಗೆ?' ಎಂಬ ಯಶಸ್ವಿ ಕಾರ್ಯಗಾರದ ನಂತರ ತನ್ನ ಎರಡನೇ ಕಾರ್ಯಕ್ರಮವಾಗಿ 'ಅವಲಂಬನ' 10ನೇ ತರಗತಿಯ ಮಕ್ಕಳು ಹಾಗೂ ಅವರ ತಾಯ್ತಂದೆಯರಿಗೆ ಬದಲಾಗುತ್ತಿರುವ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಿರುವ ಹೊಸ ಉದ್ಯೋಗ ಅವಕಾಶಗಳನ್ನು ಪರಿಚಯಿಸುವ ದೃಷ್ಟಿಯಿಂದ 'ಭವಿಷ್ಯ' ಎಂಬ ಮಾಹಿತಿ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿದೆ.


'ಭವಿಷ್ಯ', ನಮ್ಮ ಸಮಾಜದಿಂದ ಅದೇಕೊ ಕೊಂಚ ದೂರವೇ ಉಳಿದಂತಿರುವ ಐ.ಎ.ಎಸ್, ಐ.ಪಿ.ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆಗಳಲ್ಲಿ ಇರುವ ಸಮೃದ್ಧ ಉದ್ಯೋಗಾವಕಾಶಗಳು, ವಾಣಿಜ್ಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ಉದ್ಯೋಗಗಳು ಅಂತೆಯೆ ವಿಜ್ಞಾನ, ಸಂಶೋಧನಾ ಕ್ಷೇತ್ರಗಳಲ್ಲಿ ಇರುವ ವಿಪುಲ ಜೀವನಪಥಗಳ ಕುರಿತಾದ ಮಾಹಿತಿಗಳನ್ನು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಂದಲೆ ಕೊಡಿಸುವ ಒಂದು ವಿಶಿಷ್ಟ ಕಾರ್ಯಕ್ರಮ.
 
ವಿದ್ಯಾರ್ಥಿಗಳು ಯಾರದ್ದೊ ಒತ್ತಡಕ್ಕೋ, ಅಥವಾ ಇನ್ಯಾವುದೊ ತಪ್ಪು ಮಾಹಿತಿಗಳಿಂದ ಪ್ರೇರಿತರಾಗಿಯೊ ತಮ್ಮ ಬದುಕಿನ ದಾರಿಗಳನ್ನು ಕಂಡುಕೊಳ್ಳುವ ಬದಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲೆ ತಮ್ಮ ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುವುದೇ ಯಶಸ್ಸಿಗೆ ಪ್ರೇರಕ ಎಂಬುದನ್ನು 'ಭವಿಷ್ಯ' ಬಿಂಬಿಸಲೆತ್ನಿಸಲಿದೆ. ಇದರೊಂದಿಗೆ ಸಂಗೀತ, ಚಿತ್ರಕಲೆ, ಸಾಹಿತ್ಯ, ಕ್ರೀಡೆ ಹಾಗೂ ರಂಗಕಲೆಗಳಲ್ಲಿ ತಮ್ಮ ವೃತ್ತಿ-ಪ್ರವೃತ್ತಿಯನ್ನು ಕಂಡುಕೊಂಡ ಸಾಧಕರ ಪರಿಚಯದೊಂದಿಗೆ ಅಲ್ಲಿರುವ ಉಜ್ವಲ ಅವಕಾಶಗಳ ಬಗೆಗೆ 'ಭವಿಷ್ಯ' ಬೆಳಕು ಚೆಲ್ಲಲಿದೆ. ಮಕ್ಕಳ ಮಾನಸಿಕ ಸಾಮರ್ಥ್ಯ ಹಾಗೂ ಅದರ ಒಲವು ನಿಲುವುಗಳನ್ನು ಅಳೆದು ಅದರ ಆಧಾರದ ಮೇಲೆ ಅವರವರ ಸಾಮರ್ಥ್ಯಕ್ಕನುಗುಣವಾದ ಕ್ಷೇತ್ರವನ್ನು ಗುರುತಿಸುವುದಕ್ಕೆ ಹಿನ್ನೆಲೆಯಾಗಿ ಮನೋವೈಜ್ಞಾನಿಕ ಪರಿಕ್ಷೆಯೊಂದನ್ನು ಕೂಡ ಕಾರ್ಯಾಗಾರ ಒಳಗೊಂಡಿದೆ.
 
ಈ ಕಾರ್ಯಾಗಾರ December 28ರಂದು ಪುತ್ತೂರಿನ ಮಾಣಿಮಠದಲ್ಲಿ, ಹಾಗೂ January 8ರಂದು ಸಾಗರದಲ್ಲಿ ನಡೆಯಸಲು ನಿಶ್ಚಯಿಸಲಾಗಿದೆ.

ಇದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಗುರಿ ಸಾಧನೆಗೆ ಬೇಕಾದ ಎಲ್ಲ ಸಹಕಾರ,ಮಾಹಿತಿಗಳನ್ನು ಪೂರೈಸುವ ಧೀರ್ಘಕಾಲಿನ ಯೊಜನೆಯೊಂದಕ್ಕೆ ಅವಲಂಬನದ 'ಅಕ್ಷರ' ವಿಭಾಗ ಮುನ್ನಡಿ ಇಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳ ಅಂತೆಯೆ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಸಂಗ್ರಹಕ್ಕೆ ತೊಡಗಿದೆ.

ನಮ್ಮ ನಮ್ಮ ಪುಟ್ಟ ಊರುಗಳಲ್ಲಿ 10ನೇ ತರಗತಿಯಲ್ಲಿ ಒದುತ್ತಿರುವ ಕೂಸು,ಮಾಣಿಗಳು ಬದುಕಿನ ಭದ್ರೆನೆಲೆಗಳನ್ನು ಕಾಣುವಲ್ಲಿ, ನಾವು ಕಂಡುಕೊಂಡ, ಕಾಣುತ್ತಿರುವ ನವ ನವೋನ್ವೇಶಾಲಿನಿಯಾದ ಜಗದ ಹೊಸ ಪರಿಭಾಷೆಯನ್ನು, ಪ್ರೀತಿಯಿಂದ ತಿಳಿಸುವ ಹೊಣೆ ನಮ್ಮನಿಮ್ಮೆಲ್ಲರದು.

ಹೀಗಾಗಿ ನಮ್ಮ ಸಮಾಜದ ಐ.ಎ.ಎಸ್, ಐ.ಪಿ.ಎಸ್,ಇತ್ಯಾದಿ ಆಡಳಿತ ಸೇವೆಗಳಲ್ಲಿ ಅತ್ಯುನ್ನತ ಪದವಿ ಪಡೆದವರು, ಪಿ.ಹೆಚ್.ಡಿ, ಎಮ್.ಫಿಲ್, ಇತ್ಯಾದಿ ವಿಜ್ಞಾನ ಪದವಿಧರು ಹಾಗೂ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಎಮ್.ಬಿ.ಎ ಪದವಿ ಪಡೆದವರು ಅಲ್ಲದೆ, ಸಂಗೀತ ಸಾಹಿತ್ಯ ಹೀಗೆ ಇನ್ಯಾವುದೇ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದು ಆಸಕ್ತರಿಗೆ ದಿಗ್ದರ್ಶನ ಮಾಡಬಲ್ಲವರ ಮಾಹಿತಿಯನ್ನು sevashakhe@gmail.com ಗೆ ಕಳಿಸಿಕೊಡಬೇಕಾಗಿ ವಿನಂತಿ.
 
ಇಂತದ್ದೊಂದು ಕಾರ್ಯಕ್ರಮಕ್ಕೆ ನಿಮ್ಮ ನಜರಿನಲ್ಲಿರುವ 10ನೇ ತರಗತಿಯ ಮಕ್ಕಳು, ಅವರ ಅಪ್ಪ ಅಮ್ಮಂದಿರು, ಉತ್ಸಾಹಿ ಮೇಸ್ಟ್ರುಗಳು ಬರುವಂತೆ ಮಾಡುವುದು ನಿಮ್ಮ ಜವಾಬ್ದಾರಿಯೆಂದು ನೆನಪಿಸುತ್ತಾ..

ಪ್ರೀತಿಯಿಂದ,
'ಅಕ್ಷರ' ವಿಭಾಗ
ಅವಲಂಬನ ತಂಡ.